ಶ್ರೀ ರಾಮಕೃಷ್ಣ ಜಾತ್ರಾ ಮಹೋತ್ಸವ
ಶ್ರೀ ರಾಮಕೃಷ್ಣ ಪರಮಹಂಸ, ಶ್ರೀ ಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ಭಾವಚಿತ್ರದ ಭವ್ಯ ಮತ್ತು ವರ್ಣರಂಜಿತ ಮೆರವಣಿಗೆ ಹಾಗೂ ಶ್ರೀ ರಾಮಕೃಷ್ಣ ಪರಮಹಂಸರ 188 ನೇ ಜನ್ಮದಿನಾಚರಣೆ ಸಮಾರಂಭವು ಭಾನುವಾರ 26ನೇ ಫೆಬ್ರವರಿ 2023 ರಂದು ನಗರದಲ್ಲಿ ಶ್ರೀರಾಮಕೃಷ್ಣ ಪರಮಹಂಸ ವೃತ್ತದಲ್ಲಿ ನಡೆಯಿತು. ಇದರೊಂದಿಗೆ 6 ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.
ಶಾರದಾದೇವಿ ನಗರದಿಂದ ಶ್ರೀ ಮಾತೆ ಶಾರದಾದೇವಿಯವರ ಭಾವಚಿತ್ರ ಹೊತ್ತ ರಥ, ವಿವೇಕಾನಂದನಗರದಿಂದ ಸ್ವಾಮಿ ವಿವೇಕಾನಂದರ ಭಾವಚಿತ್ರ ಹೊತ್ತ ರಥ ಹಾಗೂ ನಾರಾಯಣಶಾಸ್ತ್ತಿ ರಸ್ತೆಯಿಂದ ಹೊರಟ ರಾಮಕೃಷ್ಣ ಪರಮಹಂಸರ ಭಾವಚಿತ್ರವನ್ನು ಹೊತ್ತ ರಥ ಮೆರವಣಿಗೆಯಲ್ಲಿ ಸಾಗಿ ಗದಾಧರ ವೃತ್ತಕ್ಕೆ ಆಗಮಿಸಿ ಶ್ರೀರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಮೂರು ರಥಗಳು ಸಮಾಪನಗೊಂಡವು.
ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಹಾಗೂ ಆಶ್ರಮದ ಸಂನ್ಯಾಸಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸುತ್ತೂರು ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರಮಹಾಸ್ವಾಮೀಜಿಗಳು ಧ್ವಜಾರೋಹಣ ನೆರವೇರಿಸಿ, ಸಮಾರಂಭಕ್ಕೆ ಶುಭ ಹಾರೈಸಿದರು.
ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್, ಅಧ್ಯಕ್ಷರು, ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು, ಆದಿಚುಂಚನಗಿರಿ ಶಾಖಾ ಮಠದ ಪೀಠಾಧಿಪತಿಗಳಾದ ಶ್ರೀ ಸೋಮೇಶ್ವರನಾಥ ಸ್ವಾಮೀಜಿಗಳು, ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತಿಯವರು, ಮಾತಾ ಅಮೃತಾನಂದಮಯಿ ಮೈಸೂರು ಶಾಖಾಮಠದ ಆತ್ಮಾನಿರತಾಮೃತ ಚೈತನ್ಯರವರು, ಅರೇಬಿಕ್ ಉಪನ್ಯಾಸಕರಾದ ಮೌಲಾನಾ ಮುಫ್ತಿ ಸೈಯದ್ ತಾಜುದ್ದೀನ್, ಸಮಿತಿಯ ಅಧ್ಯಕ್ಷರು ಮತ್ತು ಸುಯೋಗ್ ಆಸ್ಪತ್ರೆಯ ಸಂಸ್ಥಾಪಕರೂ ಮತ್ತು ಹೃದ್ರೋಗ ತಜ್ಞರಾದ ಡಾ.ಎಸ್.ಪಿ.ಯೋಗಣ್ಣನವರು, ರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷರಾದ ಶ್ರೀ. ಎಂ.ಪಾಪೇಗೌಡ, ಕಾರ್ಯದರ್ಶಿಗಳಾದ ಶ್ರೀ.ದೊರೈರಾಜ್, ಸಂಚಾಲಕರಾದ ಶ್ರೀ. ಬಸವಣ್ಣ, ಶ್ರೀ. ಬಸವಲಿಂಗಪ್ಪ, ಶ್ರೀ.ಬಸವರಾಜ್ ಮತ್ತು ಶ್ರೀ.ಗೋಪಿನಾಥ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶ್ರೀರಾಮಕೃಷ್ಣ ಜಾತ್ರಾ ಮಹೋತ್ಸವ ಸಮಿತಿಯು ಶ್ರೀರಾಮಕೃಷ್ಣ ಆಶ್ರಮ, ರಾಮಕೃಷ್ಣ ಸೇವಾ ಸಂಘ ಮತ್ತು ವಿವೇಕಬಳಗ , ರಾಮಕೃಷ್ಣಸೇವಾ ಬಳಗ, ರಾಮಕೃಷ್ಣ ಸಾಂಸ್ಕೃತಿಕ ಮತ್ತು ಕ್ರೀಡಾ ಸಮಿತಿ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ಸಮಾರಂಭವು ಮೈಸೂರು ನಗರದ ಭಕ್ತವೃಂದದ ಉಪಸ್ಥಿತಿಯಲ್ಲಿ ವರ್ಣರಂಜಿತವಾಗಿ ಸಮಾರೋಪಗೊಂಡಿತು.